ಚಿಲ್ಕಾ ಸರೋವರ -
ಭಾರತದ ಒರಿಸ್ಸ ರಾಜ್ಯದಲ್ಲಿರುವ ಒಂದು ಸರೋವರ. ಭಾರತದಲ್ಲಿ ಅತ್ಯಂತ ದೊಡ್ಡದು. ಉ.ಅ. 19ಔ 28'-19ಔ 56' ಮತ್ತು ಪೂ.ರೇ. 85ಔ 6'-85ಔ 86' ನಡುವೆ ಇರುವ ಈ ಸರೋವರದ ಬಹುಭಾಗ ಇರುವುದು ಪುರಿ ಜಿಲ್ಲೆಯ ದಕ್ಷಿಣದಲ್ಲಿ. ಸ್ವಲ್ಪಭಾಗ ಗಂಜಾಂ ಜಿಲ್ಲೆಯಲ್ಲಿದೆ. ಹಿಂದೆ ಇದು ಬಂಗಾಳ ಕೊಲ್ಲಿಯ ಅಳಿವೆಯಾಗಿತ್ತು. ಈಗ ಮರಳು ದಿಬ್ಬಗಳಿಂದ ಬೇರ್ಪಟ್ಟಿದೆ. 40-45 ಮೈ ಉದ್ದವಾಗಿಯೂ ಸರಾಸರಿ 5 ಮೈ. ಅಗಲವಾಗಿಯೂ ಸಾಮಾನ್ಯವಾಗಿ 3'-5' ಆಳವಾಗಿಯೂ ಇದೆ. ಕೆಲವು ಕಡೆ ಇದರ ಆಳ 6'. ಈ ಸರೋವರಕ್ಕೆ ನೀರು ಸುತ್ತಮುತ್ತಲ ಬೆಟ್ಟದ ಸಾಲುಗಳಿಂದ, ಮಹಾನದಿ ಭಾರ್ಗವೀ, ದಯಾ ಅಥವಾ ದೇವಿ ನದಿಗಳಿಂದ ಬರುತ್ತದೆ. ಡಿಸೆಂಬರ್‍ನಿಂದ ಜೂನ್‍ವರೆಗೆ ನೆರೆಯ ಸಮುದ್ರದಿಂದಾಗಿ ಅದರ ನೀರು ಉಪ್ಪಾಗಿರುತ್ತದೆ. ಮಳೆಗಾಲದಲ್ಲಿ ಹರಿದು ಬಂದ ಹೊಸ ನೀರಿನಿಂದಾಗಿ ಅದರ ನೀರು ಸಿಹಿಯಾಗಿರುತ್ತದೆ. ತೀರದ ಉದ್ದಕ್ಕೂ ಉಪ್ಪಿನ ಪಾತಿಗಳುಂಟು. ಆಕಾರದಲ್ಲಿ ಪೇರುಹಣ್ಣನ್ನು ಹೋಲುವ ಈ ಸರೋವರದಲ್ಲಿ ಹಲವಾರು ಸಣ್ಣ ದ್ವೀಪಗಳಿವೆ. ಪಶ್ಚಿಮ ಮತ್ತು ದಕ್ಷಿಣದಲ್ಲಿ ಬೆಟ್ಟದ ಸಾಲುಗಳಿಂದ ಕೂಡಿ ನಿಸಗ್ ರಮಣೀಯವಾದ ಸರೋವರವಿದು. ಚಿಲ್ಕಾ ಸರೋವರದಲ್ಲಿ ಮುಲ್ಲೆಟ್, ಪ್ರಾಂಫ್ರೆಟ್ ಮತ್ತು ಪ್ರಾನ್ ಮೀನುಗಳೂ ಮೊಸಳೆಗಳೂ ಇವೆ. ಬಾತುಕೋಳಿಯ ಬೇಟೆಗೆ ಮತ್ತು ಮೀನು ಹಿಡಿಯುವುದಕ್ಕೆ ಸೂಕ್ತವಾದ ಸನ್ನಿವೇಶ ಇಲ್ಲಿಯದು. ಸರೋವರ ಸಂದರ್ಶನಕ್ಕೆ ಅನುಕೂಲವಾದ ತಿಂಗಳುಗಳು ಅಕ್ಟೋಬರ್ ಮತ್ತು ಏಪ್ರಿಲ್.
										(ಎಸ್.ಎನ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ